ಚೈತ್ರ ಟಿಎಸ್

ಇಂತಹ ಸಂದಿಗ್ದ ಸನ್ನಿವೇಷದಲ್ಲಿ ಅವರ ಪರಿಸ್ಥಿತಿಯನ್ನು ಕಂಡು ನಾಡಿನ ಅನೇಕ ಸಂಘ-ಸಂಸ್ಥೆಗಳು ಸೇರಿದಂತೆ ಅನೇಕರು ಅವರೆಡೆಗೆ ಸಹಾಯಹಸ್ತ ಚಾಚಿದರು. ಕರ್ನಾಟಕದ ಎಲ್ಲ ಭಾಗಗಳಿಂದಲೂ ಬಟ್ಟೆ, ಆಹಾರ, ದಿನಬಳಕೆ ವಸ್ತುಗಳು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನ ಕೇರಳ-ಕೊಡಗಿನತ್ತ ಕಳುಹಿಸಿಕೊಡಲಾಯಿತು. ದಿನ ಬೆಳಗಾದರೆ ದೃಶ್ಯ ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗುವ ಕೇರಳ-ಕೊಡಗಿನ ಜನರ ಭೀಕರ ಪರಿಸ್ಥಿತಿಯನ್ನು ಕಂಡು ಮರುಗದ ಜೀವಗಳಿಲ್ಲ. ಮಾನವೀಯ ನೆಲೆಗಟ್ಟಿನಲ್ಲಿ ಅವರತ್ತ ಸಹಾಯಹಸ್ತ ಚಾಚುವುದು ನಮ್ಮೆಲ್ಲರ ಕರ್ತವ್ಯ.
ಕೇರಳ-ಕೊಡಗಿನ ಭೀಕರ ಪ್ರವಾಹ ಮತ್ತು ಭೂ ಕುಸಿತದ ಬಗ್ಗೆ ನಾನು ನಮ್ಮ ಬುಗುರಿ ಮಕ್ಕಳೊಂದಿಗೆ ಒಂದು ದಿನ ಚರ್ಚಿಸಿದ್ದೆ, ಪ್ರಾಕೃತಿಕ ವಿಕೋಪ ಮತ್ತು ಮಾನವೀಯ ದೃಷ್ಟಿಕೋನದಿಂದ ಬೇರೆಯವರು ಕಷ್ಟದಲ್ಲಿದ್ದಾಗ ಸಹಾಯ ಮಾಡುವುದರ ಬಗ್ಗೆ ಮಕ್ಕಳಿಗೆ ತಿಳಿಹೇಳಿದ್
ದೆ. ನಮ್ಮ ಬುಗುರಿ ಮಕ್ಕಳು ಪ್ರಾಥಮಿಕ ಶಾಲಾ ಹಂತದಲ್ಲಿ ಓದುತ್ತಿರುವ ಮಕ್ಕಳು, ಹಾಗಾಗಿ ಅವರಿಂದ ಕೊಡಗಿನ ಸಂತ್ರಸ್ಥರಿಗೆ ಯಾವುದೇ ಸಹಾಯವನ್ನ ನಿರೀಕ್ಷಿಸಲು ಸಾಧ್ಯವಿಲ್ಲವೆಂದುಕೊಂಡು ನಾನು ಸುಮ್ಮನಾಗಿ ಬಿಟ್ಟಿದ್ದೆ.

ಆದರೆ ಮರುದಿನ ನನಗೆ ಒಂದು ಶಾಕ್ ಕಾದಿತ್ತು. ಸಂಜೆ ನಾವು ಚರ್ಚಿಸಿದ ನಂತರ ಮಕ್ಕಳೆಲ್ಲ ತಮ್ಮತಮ್ಮಲ್ಲೆ ಮಾತಾಡಿಕೊಂಡು ಕೊಡಗಿನ ಸಂತ್ರಸ್ಥರಿಗೆ ಅವರು ಏನಾದರು ಸಹಾಯ ಮಾಡಬೇಕು ಎಂದು ನಿರ್ಧರಿಸಿದ್ದರು. ನಮ್ಮ ಬುಗುರಿಯ ಎಲ್ಲ ಮಕ್ಕಳು ಸೇರಿಕೊಂಡು ರಾತ್ರಿಯಿಂದಲೇ ತಮ್ಮ ಬೀದಿಯಲ್ಲಿರುವ ಎಲ್ಲರ ಮನೆಗಳಿಗೆ ತೆರಳಿ, ಸಂತ್ರಸ್ಥರಿಗೆ ಬೇಕಾದ ಬಟ್ಟೆ, ಆಹಾರ ಪದಾರ್ಥ ಮತ್ತು ಕೆಲವರಿಂದ ಹಣವನ್ನು ಸಂಗ್ರಹಿಸಿದರು. ಆಶ್ಚರ್ಯವೆಂದರೆ ಬುಗುರಿ ಮಕ್ಕಳು ಹಾಗೇ ಒಂದು ರಾತ್ರಿಯಲ್ಲಿ ಸಂಗ್ರಹಿಸಿದ್ದು ಸುಮಾರು ಐದು ಸಾವಿರ ರೂಪಾಯಿ ಹಣ ಮತ್ತು ನಾಲ್ಕು ಚೀಲಗಳಷ್ಟು ಬಟ್ಟೆಗಳನ್ನ. ಹಾಗೇ ಸಂಗ್ರಹಿಸಿದ ಹಣದಿಂದ ಬ್ಲಾಕೇಟ್, ನೀರು, ಬಿಸ್ಕೆಟ್ ಮತ್ತು ಆಹಾರ ಸಾಮಗ್ರಿಗಳನ್ನ ತೆಗೆದುಕೊಂಡು ಸ್ಥಳಿಯ ಸುದ್ದಿ ವಾಹಿನಿಯೊಂದರ ಮೂಲಕ ಕೊಡಗಿನ ಸಂತ್ರಸ್ಥರಿಗೆ ಅದೆಲ್ಲವನ್ನು ತಲುಪಿಸಿದ್ದರು.
ನಮ್ಮ ಬುಗುರಿಯ ಅನೇಕ ಮಕ್ಕಳಿಗೆ ಸರಿಯಾದ ಊಟವಿಲ್ಲ, ಬಟ್ಟೆಯಿಲ್ಲ ಅವರ ತಂದೆ-ತಾಯಿಯರು ಕೂದಲು ವ್ಯಾಪಾರ ಮಾಡುವವರು. ಮನೆಯಲ್ಲಿ ಬಡತನವಿದ್ದರು ಬೇರೆಯವರು ಕಷ್ಟದಲ್ಲಿದ್ದಾಗ ನಮ್ಮ ಕೈಲಾದ ಸಹಾಯ ಮಾಡಬೇಕು ಎಂಬ ಆ ಮಕ್ಕಳ ಚಿಂತನೆಯೇ ಅದ್ಭುತ. ಮಾನವೀಯ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದು ನಾನು ಕೇವಲ ಪಾಠ ಮಾಡಿದ್ದೆ, ಆದರೆ ನಮ್ಮ ಬುಗುರಿ ಮಕ್ಕಳು ಅದನ್ನ ವಾಸ್ತವದಲ್ಲಿ ಮಾಡಿತೋರಿಸಿದ್ದಾರೆ. ಈ ಮಕ್ಕಳಲ್ಲಿ ಇಂತಹ ಉತ್ತಮ ಚಿಂತನೆಗಳು ಬೆಳೆಯಲು ಸಾಧ್ಯವಾಗಿದ್ದು ನಮ್ಮ ಹಸಿರುದಳ ಸಂಸ್ಥೆಯ ಬುಗುರಿ ಗ್ರಂಥಾಲಯದಿಂದ. ನಮ್ಮ ಬುಗುರಿ ಗ್ರಂಥಾಲಯ ಮಕ್ಕಳಿಗೆ ಕೇವಲ ಓದುವುದನ್ನ ಕಲಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಆ ಮಕ್ಕಳಿಗೆ ಬೇಕಾದ ಜೀವನ ಮೌಲ್ಯಗಳನ್ನು ಒದಗಿಸುತ್ತಿದೆ. ಆ ಮೂಲಕ ಅವರನ್ನ ಪ್ರಬುದ್ಧ ಪ್ರಜೆಗಳನ್ನಾಗಿ ರೂಪಿಸಲು ಶ್ರಮಿಸುತ್ತಿದೆ. ನಮ್ಮ ಬುಗುರಿ ಮಕ್ಕಳ ಈ ಮಾನವೀಯ ಕೆಲಸಕ್ಕೆ ನಾನು ಹೆಮ್ಮೆ ಪಡುತ್ತಾ, ಅವರಿಗೆ ನನ್ನದೊಂದು ಸಲಾಮ್…!
Summary of the blog in English:
Waste-pickers children fundraise for relief operations in Kodagu
The children from Mysuru Buguri Library took initiative and collected old clothes and raised funds of Rs. 5000 from the people in their basti (settlement) to purchase blankets, biscuits and water for the flood relief operations in Kodagu. The collected things have been handed over to the local media channel.
Knowing our (waste-pickers)children’s economic status I didn’t expect anything from them for this operation. Our Buguri kids proved me wrong and showed that we can also contribute something in our own capacity. This incident makes me speechless. Our children’s humanity towards the Kodagu and Kerala made me proud!