by Chaitra T.S.
ಬುಗುರಿ..! ಎಂದಾಕ್ಷಣ ನಮ್ಮೆಲ್ಲರ ಮನದಲ್ಲಿ ಮೂಡುವುದು ನಮ್ಮ ಬಾಲ್ಯದ ಆ ಚೆಂದನೆಯ ಆಟ. ತಿರುಗುವ ಬುಗುರಿಯನ್ನು ನೋಡುವುದೇ ಒಂದು ಸಂಭ್ರಮ. ನಾವೆಲ್ಲರೂ ಬುಗುರಿಯೊಂದಿಗೆ ಆಟವಾಡುತ್ತಲೇ ನಮ್ಮ ಬಾಲ್ಯವನ್ನು ಕಳೆದಿದ್ದೇವೆ. ಆದರೆ ಈಗ ನಾನು ಹೇಳುವ ಬುಗುರಿ ಸ್ವಲ್ಪ ವಿಭಿನ್ನವಾದ ಪರಿಕಲ್ಪನೆ. ಈ ನಮ್ಮ ಬುಗುರಿಯೊಳಗೆ ಮಕ್ಕಳು ಪುಸ್ತಕಗಳೊಂದಿಗೆ ಆಟವಾಡುತ್ತಾ… ಪುಸ್ತಕಗಳನ್ನು ಓದುತ್ತಾ ಸಂಭ್ರಮಿಸುತ್ತಾರೆ. ಹೌದು, ಹೀಗೆ ಪುಸ್ತಕ ಮತ್ತು ಮಕ್ಕಳ ನಡುವೆ ಒಡನಾಟ ಬೆಳೆಸುವ ಬುಗುರಿಯೊಂದು ಅರಮನೆ ನಗರಿ ಮೈಸೂರಿನ ಬಿ.ಎಂ.ಶ್ರೀ ನಗರದಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.ಇದು ಹಸಿರುದಳ ಸಂಸ್ಥೆಯೂ ಕಸ ಆಯುವವರ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಮೂಡಿಸಿ, ಪುಸ್ತಕಗಳೊಡನೆ ಒಡನಾಟ ಬೆಳೆಸಿ, ಅವರಲ್ಲಿ ಅಡಗಿರುವ ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭಗೊಂಡ ಯೋಜನೆ ಬುಗುರಿ ಸಮುದಾಯ ಗ್ರಂಥಾಲಯ. ಈ ನಮ್ಮ ಬುಗುರಿ ಗ್ರಂಥಾಲಯ ಇನ್ನು ಕೆಲವೇ ದಿನಗಳಲ್ಲಿ ತನ್ನ ನಾಲ್ಕನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದೆ. ಇನ್ನು ಕಳೆದ ಮೂರು ವರ್ಷಗಳಿಂದ ಬುಗುರಿ ಸಮುದಾಯ ಗ್ರಂಥಾಲಯದಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಂದ ಮಕ್ಕಳ ಅಭಿರುಚಿ, ಓದಿನ ಆಸಕ್ತಿ, ಸೃಜನಾತ್ಮಕತೆ, ನಡುವಳಿಕೆ, ಯೋಚನೆಯ ಲಹರಿ ಸೇರಿದಂತೆ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಬುಗುರಿ ಗ್ರಂಥಾಲಯದಲ್ಲಿ ಮಕ್ಕಳಿಗೆ ಕಲಿಸುತ್ತಾ.. ಅವರೊಂದಿಗೆ ನಾವು ಕಲಿಯುತ್ತಾ… ಸಾಗುವುದು ನಿಜಕ್ಕೂ ನನಗೆ ಅದ್ಭುತವಾದ ಅನುಭವ ನೀಡಿದೆ.
ಇನ್ನು ಕಳೆದ ವರ್ಷ ಮೊದಲ ಬಾರಿ ಕಾಣಿಸಿಕೊಂಡ ಕೊರೊನಾ ರೋಗದ ಪರಿಣಾಮ ನಮ್ಮ ಬುಗುರಿ ಗ್ರಂಥಾಲಯನ್ನು ನಾವು ಮುಚ್ಚಬೇಕಾಗಿ ಬಂತು. ಆಗ ಮಕ್ಕಳನ್ನು ಸದಾ ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳುವುದೇ ನಮ್ಮ ಮುಂದಿರುವ ಬಹುದೊಡ್ಡ ಸವಾಲಾಗಿತ್ತು. ಆಗ ಆನ್ಲೈನ್ ಮೂಲಕ ತರಗತಿಗಳನ್ನು ನಡೆಸಲು ನಿರ್ಧರಿಸಿದೆವು. ಆದರೆ ಅನೇಕ ಮಕ್ಕಳ ತಂದೆ-ತಾಯಿಯರ ಬಳಿ ಸ್ಮಾರ್ಟಫೋನ್ಗಳಿರಲಿಲ್ಲ. ಆಗ ನಾವು ಮಕ್ಕಳನ್ನು ಎರಡು ತಂಡಗಳಾಗಿ ವಿಂಗಡಿಸಿದೇವು. ಒಂದು ತಂಡಕ್ಕೆ ವಾಟ್ಸ್ಅಪ್ ಗ್ರೂಪ್ ಮೂಲಕ, ಪ್ರತಿದಿನ ಪುಸ್ತಕ, ಆಡಿಯೋ, ಪ್ರಶ್ನೆಗಳು, ಚಟುವಟಿಕೆಗಳನ್ನು ನೀಡುತ್ತಿದ್ದೇವು. ಇನ್ನೊಂದು ತಂಡಕ್ಕೆ ಕಾನ್ಪರೆನ್ಸ್ ಕಾಲ್ ಮೂಲಕ ನಾಲ್ಕೈದು ಮಕ್ಕಳನ್ನು ಒಂದೇ ಬಾರಿಗೆ ಸಂಪರ್ಕಿಸಿ, ಕರೆಯ ಮೂಲಕವೇ ಕತೆ ಮತ್ತು ಚಟುವಟಿಕೆಗಳನ್ನು ನೀಡುತ್ತಿದ್ದೇವು. ವಿಶೇಷವೆಂದರೆ ಈ ನಮ್ಮ ಯೋಜನೆಗೆ ಅನೇಕ ಸ್ವಯಂ ಸೇವಕರು ಕೈಜೋಡಿಸಿ, ಅವರು ಕೂಡಾ ಮಕ್ಕಳಿಗೆ ಕತೆ ಸೇರಿದಂತೆ ಅನೇಕ ಚಟುವಟಿಕೆಗಳನ್ನು ಹೇಳಿಕೊಟ್ಟರು. ಹೀಗೆ ಆನ್ಲೈನ್ ಮೂಲಕವೇ ಮಕ್ಕಳಿಗೆ ಕಥೆಗಳು, ಕಥೆಗೆ ಸಂಬಂಧಪಟ್ಟ ಚಟುವಟಿಕೆಗಳನ್ನು ಕೊಟ್ಟು ಅವರನ್ನು ಸದಾ ಓದಿನಲ್ಲಿ, ಸೃಜನಾತ್ಮಕ ಕೆಲಸಗಳಲ್ಲಿ ಮಗ್ನರಾಗಿರುವಂತೆ ನೋಡಿಕೊಂಡೆವು. ಇದರ ಜೊತೆಗೆ ಬುಗುರಿ ತಂಡ ಬೆಂಗಳೂರಿನ ಸಮುದಾಯ ರೇಡಿಯೋ Radio Active 90.4MHz ಮೂಲಕ ‘ಬುಗುರಿ ಪಾಡ್ಕಾಸ್ಟ್’ ಎಂಬ ಮಕ್ಕಳ ರೇಡಿಯೋ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದೇವು. ಈ ಪಾಡ್ಕಾಸ್ಟ್ ಮೂಲಕ ಮಕ್ಕಳ ಸ್ನೇಹಿ ಕೊರೊನಾ ಜಾಗೃತಿ, ಆರೋಗ್ಯ, ದೇಶಿ ಆಹಾರ ಪದ್ದತಿ, ಪರಿಸರ ಸಂರಕ್ಷಣೆ ಹೀಗೆ ಮುಂತಾದ ವಿಷಯಗಳ ಕುರಿತು ತಿಳುವಳಿಕೆ ಮೂಡಿಸಲಾಯಿತು. ಪಾಡ್ಕಾಸ್ಟ್ ನ ವಿಶೇಷವೆಂದರೆ ಕೊರೊನಾ ಸಂಬಂಧಿತ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲು, ‘ಮಾಯಾ-ತುಂಗಾ’ ಎಂಬ ವಿಶೇಷ ಕಥಾ ಸರಣಿಯನ್ನು ಪ್ರಾರಂಭಿಸಿ, ಕನ್ನಡ,ಇಂಗ್ಲೀಷ್,ಬೆಂಗಾಳಿ, ತಮಿಳು ಭಾಷೆಗಳಲ್ಲಿ ಮೂರು ಸರಣಿಗಳಾಗಿ ಪ್ರಸಾರ ಮಾಡಿದೇವು. ಈ ನಮ್ಮ ಪ್ರಯತ್ನಗಳಿಗೆ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ವಿಶೇಷ. ನಾವು ಕೊಡುವ ಚಟುವಟಕೆಗಳನ್ನು ಮಕ್ಕಳು ಅತ್ಯಂತ ಉತ್ಸಾಹದಿಂದ ಮಾಡುತ್ತಿದ್ದರು. ಹೀಗಾಗಿ ಆನ್ಲೈನ್ ಮೂಲಕ ನಾವು ಮಕ್ಕಳೊಂದಿಗೆ ನಿಕಟ ಸಂಪರ್ಕ ಸಾಧಿಸಿ, ಉತ್ತಮ ಕಲಿಕಾ ವಾತಾವರಣವನ್ನು ನಿರ್ಮಿಸಬಹುದು ಎಂಬ ಸತ್ಯ ನಮಗೆ ಮೊದಲ ಬಾರಿಯ ಲಾಕ್ಡೌನ್ನಲ್ಲಿ ಅರಿವಾಯಿತು.
ಇನ್ನು ಲಾಕ್ಡೌನ್ ಮುಗಿದ ಮೇಲೆ ಮತ್ತೆ ಬುಗುರಿ ಗ್ರಂಥಾಲಯವನ್ನು ಆರಂಭಿಸಿದೇವು. ಆಗ ಮಕ್ಕಳು ಲಾಕ್ಡೌನ್ ದಿನಗಳಲ್ಲಿ ತಮಗಾದ ಅನುಭವ ಮತ್ತು ಕಲಿತ ವಿಷಯಗಳ ಕುರಿತು ಕಥೆ, ಕವಿತೆ, ನೃತ್ಯ,ನಾಟಕಗಳನ್ನು ರಚಿಸಿ, ನಮ್ಮ ಬುಗುರಿಯ 3ನೇ ವರ್ಷದ ವಾರ್ಷಿಕೋತ್ಸವದಲ್ಲಿ ಪ್ರದರ್ಶಿಸಿದರು. ಲಾಕ್ಡೌನ್ನಲ್ಲಿ ನಾವು ನಡೆಸಿದ ವಿಶೇಷ ಚಟುವಟಿಕೆಗಳಿಂದ ಮಕ್ಕಳ ಮಾನಸಿಕ ಮನೋಭಾವ, ಸ್ವತಂತ್ರ ಬರವಣಿಗೆ, ನಾಯಕತ್ವ ಸೇರಿದಂತೆ ಅನೇಕ ವಿಶೇಷ ಗುಣಗಳನ್ನು ಬೆಳೆಸಿಕೊಂಡಿದ್ದರು. ಅದೆಲ್ಲವೂ ಪ್ರದರ್ಶಿನದ ಮೂಲಕ ಅಭಿವ್ಯಕ್ತವಾಯಿತು.
ಹೀಗೆ ಹಲವಾರು ಚಟುವಟಿಕೆಗಳ ಮೂಲಕ ಬುಗುರಿ ಯಥಾಸ್ಥಿತಿಗೆ ಮರುಳುತ್ತಿರುವಾಗಲೇ, ಕೊರೊನಾ ಸಾಂಕ್ರಾಮಿಕ ರೋಗದ ಎರಡನೇಯ ಅಲೆಯ ಪರಿಣಾಮ ಮತ್ತೆ ಲಾಕ್ಡೌನ್ ಘೋಷಣೆಯಾಯಿತು. ಆಗ ನಾವು ಕಳೆದ ಬಾರಿಗಿಂತ ಪರಿಣಾಮಕಾರಿಯಾಗಿ ಲಾಕ್ಡೌನ್ ದಿನಗಳನ್ನು ಬಳಸಿಕೊಳ್ಳಲು ನಿರ್ಧರಿಸಿ, ಮತ್ತೆ ಆನ್ಲೈನ್ ಮೂಲಕವೇ ಮಕ್ಕಳೆಲ್ಲರನ್ನು ಒಗ್ಗೂಡಿಸಿದೆವು. ನಮ್ಮ ಬುಗುರಿ ವಾಟ್ಸಪ್ ಗ್ರೂಪ್ನಲ್ಲಿ ಎಲ್ಲ ವಯೋಮಾನದ ಮಕ್ಕಳಿದ್ದು, ಅವರಿಗೆ ತಕ್ಕಂತೆ ಚಟುವಟಿಕೆಗಳನ್ನು ನೀಡುತ್ತಿದ್ದೇವೆ. ಕೆಲವು ಮಕ್ಕಳಿಗೆ ಮೊಬೈಲ್ ಕೊರತೆ, ಇನ್ನು ಕೆಲವರಿಗೆ ಇಂಟರ್ನೆಟ್ ಇಲ್ಲದಿರುವುದನ್ನು ನಾವು ಗಮನಿಸಿ, ಅಂತಹ ಮಕ್ಕಳಿಗಾಗಿ ‘ಲಾಕ್ಡೌನ್ ಬುಕ್ ಕಿಟ್’ಗಳನ್ನು ನೀಡಿದೇವು. ಆ ಬುಕ್ ಕಿಟ್ ಕನ್ನಡ-ಇಂಗ್ಲೀಷ ಕಥೆಗಳು ಮತ್ತು ಅದಕ್ಕೆ ಸಂಬಂಧಿಸಿದ ಅನೇಕ ಚಟುವಟಿಕೆಗಳಿಂದ ರೂಪಕೊಂಡಿದೆ. ಇದರಿಂದ ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದ ಮಕ್ಕಳು ಸಹ ಕಲಿಕಾ ಚಟುವಟಿಕೆಗಳಲ್ಲಿ ಮಗ್ನರಾಗಲು ಸಹಾಯಕವಾಯಿತು. ಹೀಗೆ ಕತೆ-ಕವನಗಳನ್ನು ಓದುವುದು, ಕ್ರಾಫ್ಟ್ ಮಾಡುವುದು, ವಿಜ್ಞಾನದ ಮಾದರಿ ತಯಾರಿಕೆ, ಚಿತ್ರ ಬಿಡಿಸುವುದು, ಚಿಕ್ಕ ನಾಟಕಗಳ ರಚನೆ ಸೇರಿದಂತೆ ಅನೇಕ ವಿಭಿನ್ನವಾದ ಚಟುವಟಿಕೆಗಳಲ್ಲಿ ನಮ್ಮ ಬುಗುರಿ ಮಕ್ಕಳು ತೊಡಗಿಸಿಕೊಂಡ ಪರಿಣಾಮ, ಲಾಕ್ಡೌನ್ ವೇಳೆಯಲ್ಲಿಯೂ ನಮ್ಮ ಬುಗುರಿ ಮಕ್ಕಳು ಅತ್ಯಂತ ಕ್ರಿಯಾಶೀಲರಾಗಿ ಹೊರಹೊಮ್ಮುತ್ತಿದ್ದಾರೆ.

ಒಟ್ಟಾರೆಯಾಗಿ ಲಾಕ್ಡೌನ್ ದಿನಗಳಲ್ಲಿ ನಮ್ಮ ಬುಗುರಿ ಮಕ್ಕಳು ವಿಭಿನ್ನ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಮಕ್ಕಳೆಲ್ಲರೂ ಒಟ್ಟಾಗಿ ಸೇರಿ ಕಲಿಯುವುದು, ತಮ್ಮತಮ್ಮಲ್ಲೇ ವಿಷಯದ ಕುರಿತು ಚರ್ಚೆ ನಡೆಸುವುದು, ಬೇರೆಯವರ ಕಷ್ಟಗಳಿಗೆ ಸ್ಪಂದಿಸುವುದು, ಮೊಬೈಲ್ ಇಲ್ಲದಿರುವ ಮಕ್ಕಳನ್ನು ಇತರೆ ಮಕ್ಕಳು ತಮ್ಮೊಂದಿಗೆ ಸೇರಿಸಿಕೊಂಡು ಒಟ್ಟಾಗಿ ಚಟುಚಟಿಕೆಗಳನ್ನು ಮಾಡುವುದು, ಹಾಗೆ ಚಿಕ್ಕ ಮಕ್ಕಳಿಗೆ ದೊಡ್ಡ ಮಕ್ಕಳು ಪಾಠ ಹೇಳಿ ಕೊಡುವ ಮೂಲಕ ಎಲ್ಲರೂ ಒಗ್ಗಟ್ಟಾಗಿ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಅನೇಕ ಮಕ್ಕಳು ಸ್ವತಃ ತಾವೇ ಕಥೆ, ಕವಿತೆ, ನಾಟಕಗಳನ್ನು ಬರೆಯುತ್ತಿದ್ದು, ಇದು ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿದೆ. ಕೊನೆಯದಾಗಿ ಲಾಕ್ಡೌನ್ ದಿನಗಳು ನಮ್ಮ ಬುಗುರಿ ಗ್ರಂಥಾಲಯದ ಮಕ್ಕಳಿಗೆ ಉತ್ತಮ ವಾತಾವರಣವನ್ನೇ ಒದಗಿಸಿದೆ ಎಂದರೆ ತಪ್ಪಾಗಲಾರದು.

Chaitra T.S. is the coordinator for the Buguri Community Library in Mysuru.