
ಪ್ರಪಂಚದಲ್ಲಿ ಹಲವಾರು ವೃತ್ತಿಪರ ಕೆಲಸಗಳಿವೆ. ಅದರಲ್ಲಿ ನಮ್ಮ ಕೂದಲು ವ್ಯಾಪಾರವು ಒಂದಾಗಿದೆ. ನಾವು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಬಿ.ಎಂ.ಶ್ರೀ ನಗರ ಸಮುದಾಯದ ನಿವಾಸಿಗಳು. ನಮ್ಮ ವೃತ್ತಿಯಲ್ಲಿನ ಲಾಭ- ನಷ್ಟ, ಕಷ್ಟ-ಸುಖ, ನೋವು-ನಲಿವುಗಳ ಅನುಭವನ್ನು ಮತ್ತು ಕೂದಲು ವ್ಯಾಪಾರ ಮಾಡುವ ನಮ್ಮ ಬದುಕಿನ ವಿವಿಧ ಆಯಾಮಗಳನ್ನು ಈ ಲೇಖನದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ನಮ್ಮ ಸಮುದಾಯದ ಕೂದಲು ವ್ಯಾಪಾರ ಮತ್ತು ಅದರ ಹಿಂದಿನ ಇತಿಹಾಸ
ನಮ್ಮ ಸಮುದಾಯದವರಿಗೆ ಎರಡು ದಶಕದ ಹಿಂದೆ ಈ ಕೂದಲು ವ್ಯಾಪಾರದ ಬಗ್ಗೆ ತಿಳಿದಿರಲಿಲ್ಲ. ನಾವು ಮುಖ್ಯವಾಗಿ ಬೀಗ ಮತ್ತು ವಂದ್ರಿ ಕೆಲಸಗಳನ್ನು ಮಾಡುತ್ತಿದ್ದೇವು. ನಮಗೆ ವಾಸ ಮಾಡಲು ನಿರ್ದಿಷ್ಟವಾದ ಸ್ಥಳ ಇರಲಿಲ್ಲ. ಹಾಗಾಗಿ ನಾವು ಬೇರೆ ಬೇರೆ ಊರುಗಳಿಗೆ ವಲಸೆ ಹೋಗುತ್ತಾ, ಅಲ್ಲಿಯೇ ಗೂಡಿಸಲು ಹಾಕಿಕೊಂಡು ವಾಸಿಸುತ್ತಿದ್ದೇವು. ಹೀಗಾಗಿಯೇ ನಮ್ಮ ಸಮುದಾಯಕ್ಕೆ ಶಿಕ್ಷಣ ಸಿಗಲಿಲ್ಲ. ನಾವು ನಮ್ಮ ಪೋಷಕರೊಡನೆ ಬೇರೆ ಬೇರೆ ಊರುಗಳಿಗೆ ಹೋಗಬೇಕಾದರೆ, ಆ ಊರುಗಳಲ್ಲಿ ಇರುವ ಸ್ಥಳಗಳಲ್ಲಿ ಟೆಂಟ್ಗಳನ್ನು ಹಾಕಿಕೊಳ್ಳುತ್ತಿದ್ದೇವು ಮತ್ತು ನಮ್ಮನ್ನು ಟೆಂಟ್ನಲ್ಲೇ ಬಿಟ್ಟು ಅವರು ವ್ಯಾಪಾರಕ್ಕೆ ಹೋಗುತ್ತಿದ್ದರು. ಹೀಗೆ ಅಲೆಮಾರಿಗಳಾಗಿದ್ದ ನಾವು ಮೈಸೂರಿನ ಇಂದಿನ ಬಿ.ಎಂ.ಶ್ರೀ ನಗರದಲ್ಲಿ ಒಂದು ಸೂಕ್ತ ನೆಲೆ ಕಂಡುಕೊಂಡೆವು. ಅನೇಕ ವರ್ಷಗಳ ಹಿಂದೆ ಈ ಸ್ಥಳ ಊರ ಹೊರಗಿನ ನಿರ್ಜನ ಪ್ರದೇಶವಾಗಿದ್ದರಿಂದ ನಮ್ಮ ಜನಾಂಗದವರೆಲ್ಲಾ ಗುಂಪುಗೂಡಿ ಇಲ್ಲಿಯೇ ನೆಲೆಸಲು ಆರಂಭಿಸಿದೇವು. ಹೀಗೆ ನೆಲೆಸಿದ ನಮ್ಮ ಜನಾಂಗದವರನ್ನು ‘ವಂದ್ರಿ ವ್ಯಾಪರಸ್ಥರು’ ಎಂದು ಮೊದಲು ಗುರುತಿಸಲಾಯಿತು. ನಮ್ಮ ಸಮುದಾಯದವರೆಲ್ಲಾ ವಂದ್ರಿ ವ್ಯಾಪಾರ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದರು. ಆಗ ವಂದ್ರಿ ವ್ಯಾಪಾರ ಮಾಡುತ್ತಾ, ನೀಲಮ್ಮನವರು ಬೆಂಗಳೂರಿನ ಕನಕಪುರಕ್ಕೆ ಹೋದರು. ಅಲ್ಲಿ ಅವರಿಗೆ ಕೂದಲು ವ್ಯಾಪಾರಸ್ಥರು ಪರಿಚಯವಾದರು. ಅವರು ಕೂದಲು ವ್ಯಾಪಾರದ ಬಗ್ಗೆ ತಿಳಿಸಿದರು ಹಾಗೂ ಕೂದಲು ಮಾಲಿಕರನ್ನು ಪರಿಚಯಿಸಿದರು. ಆಗ ನೀಲಮ್ಮನವರು ಮೈಸೂರಿನ ನಮ್ಮ ಸಮುದಾಯದವರಿಗೆ ಈ ವ್ಯಾಪಾರವನ್ನು ಹೇಳಿಕೊಟ್ಟರು. ಕೇವಲ ವಂದ್ರಿ ವ್ಯಾಪಾರ ಮಾಡುತ್ತಿದ್ದ ನಾವು ನಂತರದ ದಿನಗಳಲ್ಲಿ ಕೂದಲು ವ್ಯಾಪಾರವನ್ನು ನಮ್ಮ ವೃತ್ತಿಯಾಗಿಸಿಕೊಂಡೆವು. ಈಗಲೂ ನಾವು ಕೂದಲು ಮತ್ತು ವಂದ್ರಿ ಎರಡು ವ್ಯಾಪಾರವನ್ನೂ ಮಾಡುತ್ತಿದ್ದೇವೆ.

ಕೂದಲು ವ್ಯಾಪಾರದಲ್ಲಿ ಆದ ಬದಲಾವಣೆಗಳು..!
ಈ ಕೂದಲು ವ್ಯಾಪಾರದಲ್ಲಿ ನಾವು ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಪ್ರಾರಂಭದಲ್ಲಿ ಕೂದಲಿಗೆ ಪ್ರತಿಯಾಗಿ ನಾವು ಮಹಿಳೆಯರು ಬಳಸುವ ಕ್ಲಿಪ್-ಪಿನ್, ರಿಬ್ಬನ್, ಬಟನ್, ದಾರಗಳನ್ನು ಕೊಡುತ್ತಿದ್ದೇವು. ಆದರೆ ಇತ್ತೀಚಿನ ದಿನಗಳಲ್ಲಿ ಕೂದಲಿಗೆ ಪ್ರತಿಯಾಗಿ ನಾವೇ ತಯಾರಿಸಿದ ಪಾತ್ರೆಗಳು, ವಂದ್ರಿ ಮತ್ತು ಸೇರುಗಳನ್ನು ಕೊಡುತ್ತಿದ್ದೇವೆ. ನಮ್ಮಲ್ಲಿಯೇ ಇನ್ನು ಕೆಲವರು ವಸ್ತುಗಳ ಬದಲಾಗಿ, ಗ್ರಾಹಕರಿಗೆ ಹಣವನ್ನು ಕೊಡುತ್ತಾರೆ. ಇನ್ನು ಮೊದಲಿಗೆ ನಾವು ನಡೆದುಕೊಂಡು ಹೋಗಿ ಮನೆಮನೆಗಳಲ್ಲಿ ಕೂದಲನ್ನು ಸಂಗ್ರಹಿಸುತ್ತಿದೇವು. ಆದರೆ ಈಗ ವಾಹನಗಳನ್ನು ಬಳಸಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ಪ್ರಾರಂಭದಲ್ಲಿ ಕೂದಲಿಗೆ ಸಾಕಷ್ಟು ಬೇಡಿಕೆ ಇರಲಿಲ್ಲ. ಹೀಗಾಗಿ ಅದರಿಂದ ಬರುವ ಲಾಭವೂ ಕಡಿಮೆ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಕೂದಲಿಗೆ ವಿದೇಶಗಳಲ್ಲಿಯೂ ಬಹುಬೇಡಿಕೆ ಬಂದಿದೆ. ಹೀಗಾಗಿ ಉತ್ತಮ ಮಾರುಕಟ್ಟೆ ಸೃಷ್ಟಿಯಾಗಿದೆ. ಕೂದಲು ವ್ಯಾಪಾರವೂ ಈಗ ಒಂದು ಲಾಭದಾಯಕ ವೃತ್ತಿಯಾಗಿದೆ. ಈ ಮೊದಲು ಕೂದಲು ವ್ಯಾಪಾರ ಮಾಡಿಕೊಂಡು ಜೀವನ ನಡೆಸುವುದು ಕಷ್ಟ ಆಗುತ್ತಿತ್ತು. ಆದರೆ ಈಗ ಕೂದಲು ವ್ಯಾಪಾರದಲ್ಲಿ ಸ್ವಲ್ಪ ಲಾಭ ಕಾಣುತ್ತಿದ್ದೇವೆ. ಚಲನಚಿತ್ರಗಳಲ್ಲಿ, ಸೀರಿಯಲ್ಗಳಲ್ಲಿ ಮತ್ತು ಮದುವೆ ಸಂದರ್ಭಗಳಲ್ಲಿ ಕೂದಲನ್ನ ಬಳಸುವುದರಿಂದ ಕೂದಲು ವ್ಯಾಪಾರ ಮಾಡುವÀ ನಮ್ಮಂತವರ ಜೀವನ ಮಟ್ಟ ಸುಧಾರಿಸಿದೆ.

ಕೂದಲಿನ ಪಯಣ
ಕೂದಲು ವ್ಯಾಪಾರದವರ ದಿನಚರಿ
ನಮ್ಮ ಸಮುದಾಯದಲ್ಲಿ ಕೂದಲು ವ್ಯಾಪಾರ ಮಾಡುವವರು ಬೆಳಿಗ್ಗೆ 6 ಗಂಟೆಯೊಳಗೆ ಎದ್ದು ಮನೆ ಕೆಲಸ ಮುಗಿಸಿ, ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ. ಮಕ್ಕಳು ಸ್ಕೂಲಿಗೆ ಹೋದಾಗ ಅವರು ವ್ಯಾಪರಕ್ಕೆ ಸಿದ್ದರಾಗಿ ಪಾತ್ರೆಗಳನ್ನು ತೆಗೆದುಕೊಂಡು ಆಟೋ ಅಥವಾ ಬಸ್ನಲ್ಲಿ ವ್ಯಾಪಾರಕ್ಕೆ ಹೋಗುತ್ತಾರೆ. ಸಂಜೆ 5 ಗಂಟೆಗೆ ವ್ಯಾಪಾರ ಮುಗಿಸಿಕೊಂಡು ಬಂದು, ಟೀ-ಕಾಫಿ ಕುಡಿದು ಮತ್ತೆ ಟಿನ್ ಕೆಲಸ ಮಾಡಲು ಕೂರುತ್ತಾರೆ. ವಂದ್ರಿ, ಸೇರು, ಪಾವುಗಳನ್ನು ಮಾಡುತ್ತಾರೆ. 6:30ಕ್ಕೆ ಕೆಲಸ ಮುಗಿಸಿ ರಾತ್ರಿಗೆ ಅಡುಗೆ ಮಾಡಿ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಖುಷಿ ಖುಷಿಯಾಗಿ ಊಟ ಮಾಡಿ ಮಲಗುತ್ತಾರೆ. ಆದರೆ ವಾರದಲ್ಲಿ ಶುಕ್ರವಾರ ಮಾತ್ರ ಕೂದಲು ವ್ಯಾಪಾರಕ್ಕೆ ಹೋಗದೆ, ಮನೆಯಲ್ಲಿ ಪೂಜೆ ಮಾಡಿ, ಟಿನ್ ಕೆಲಸ ಮಾಡಲು ಕೂರುತ್ತಾರೆ ಅಥವಾ ಅವರ ಅಣ್ಣ, ತಮ್ಮ, ಅಕ್ಕ, ತಂಗಿಯಂದಿರ ಮನೆಗೆ ಹೋಗಿ ಮಾತಾಡುತ್ತಾ ಸಮಯ ಕಳೆಯುತ್ತಾರೆ. ಇನ್ನು ಗಂಡಸರು ರಜೆ ಹಾಕಿದ ದಿನ ಮೀನು ಬೇಟೆಗೆ ಹೋಗಿ ಮೀನು ಹಿಡಿದುಕೊಂಡು ಬಂದು ಅಡುಗೆ ಮಾಡಿ ಊಟ ಮಾಡುತ್ತಾರೆ. ಹಾಗೆ ಹಬ್ಬದ ದಿನ ವ್ಯಾಪಾರಕ್ಕೆ ರಜೆ ಹಾಕಿ ಹೊಸ ಬಟ್ಟೆ ಧರಿಸಿ ರುಚಿ ರುಚಿಯಾದ ಅಡುಗೆ ಮಾಡಿ ಸಂಬಂಧಿಕರ ಜೊತೆ ಕೂತು ಊಟ ಮಾಡಿ ದೇವಸ್ಥಾನ ಮತ್ತು ಸಿನಿಮಾಗಳಿಗೆ ಹೋಗುತ್ತಾರೆ. ಇದು ನಮ್ಮ ಸಮುದಾಯದ ಕೂದಲು ವ್ಯಾಪಾರ ಮಾಡುವವರ ದಿನ ನಿತ್ಯದ ಜೀವನವಾಗಿದೆ.

ಕೂದಲಿನ ಸಂಗ್ರಹ
ಇನ್ನು ನಮ್ಮ ಕೂದಲು ವ್ಯಾಪಾರಸ್ಥರಲ್ಲಿ ಕೆಲವರು ತಾವೇ ಮಾಡಿದ ವಂದ್ರಿ, ಸೇರುಗಳನ್ನು ತೆಗೆದುಕೊಂಡು ಇನ್ನೂ ಕೆಲವರು ನಮ್ಮ ಏರಿಯದಲ್ಲೇ ಇರುವ ಒಂದು ಪಾತ್ರೆ ಅಂಗಡಿಗೆ ಹೋಗಿ ಅಲ್ಲಿ ಪಾತ್ರೆಗಳನ್ನು ಖರೀಸಿದಿ, ತಮ್ಮ ವ್ಯಾಪಾರ ಸ್ನೇಹಿತರೊಂದಿಗೆ ಇವತ್ತು ಯಾವ ಏರಿಯಾಕ್ಕೆ ಹೋಗಬೇಕು ಎಂದು ನಿರ್ಧರಿಸುತ್ತಾರೆ. ನಂತರ ಕುಂಬಾರಕೊಪ್ಪಲು, ಕಲ್ಯಾಣಗಿರಿ, ವಿಜಯನಗರ, ಗೋಕುಲಂ, ಮೇಟಗಳ್ಳಿ, ಶ್ರೀನಿವಾಸನಗರ, ಬನ್ನಿಮಂಟಪ, ಹನುಮಂತ ನಗರ, ಕಾವೇರಿ ನಗರ, ಬೆಲವತ್ತ ಗ್ರಾಮ, ಮಂಡಿಮೊಹಲ್ಲಾ, ಚಾಮುಂಡಿಪುರಂ, ವಾಟರ್ಟ್ಯಾಂಕ್, ಪಡುವಾರಳ್ಳಿ, ಒಂಟಿಕೊಪ್ಪಲ್, ಬೋಗಾದಿ, ಗಾಯತ್ರಿಪುರಂ, ಉದಯಗಿರಿ, ಮಾದೇಗೌಡ ಬಡಾವಣೆ, ಕೂರ್ಗಳ್ಳಿ ಮುಂತಾದ ಏರಿಯಾಗಳಿಗೆ 4-5 ಜನರು ಸೇರಿಕೊಂಡು ಆಟೋ ಅಥವಾ ಬಸ್ನಲ್ಲಿ ಹೋಗುತ್ತಾರೆ. ಮತ್ತೆ ಅವರು ಅಲ್ಲಿಂದ ತಮ್ಮಲ್ಲಿಯೇ ಮಾತನಾಡಿಕೊಂಡು, ಬೇರೆ-ಬೇರೆ ಬಡಾವಣೆಗಳಿಗೆ ಹೋಗುತ್ತಾರೆ. ಒಬ್ಬರು ಹೋಗುವ ಬಡಾವಣೆಗೆ ಮತ್ತೊಬ್ಬರು ಹೋಗುವುದಿಲ್ಲ. ನಂತರ ಬಡಾವಣೆಗಳಲ್ಲಿ ತಿರುಗಾಡುತ್ತಾ, ಬೀದಿಯಲ್ಲಿ “ಕೂದಲು ಇದೆಯಮ್ಮ ಕೂದಲು” ಎಂದು ಸಾರಿಕೊಂಡು ಹೋಗುತ್ತಾರೆ. ಅವರನ್ನು ಕಂಡು, ಕೆಲವರು ಗುರುತಿಸುತ್ತಾರೆ. ಆಗ ಕೂದಲನ್ನು ತೂಕ ಮಾಡಿ, ತೂಕಕ್ಕೆ ತಕ್ಕಂತೆ ಏನಾದರೂ ಪಾತ್ರೆ ಅಥವಾ ವಂದ್ರಿ ಅಥವಾ ಹಣವನ್ನು ಕೊಡುತ್ತಾರೆ. ಹಾಗೆಯೇ ಸಂಜೆಯವರೆಗೆ ವ್ಯಾಪಾರ ಮಾಡಿಕೊಂಡು ಎಲ್ಲಾ ವ್ಯಾಪಾರಸ್ಥರು ಒಂದು ಕಡೆ ಮತ್ತೆ ಸೇರಿ ಅಲ್ಲಿಂದ ಮನೆಗೆ ಆಟೋ ಅಥವಾ ಬಸ್ನಲ್ಲಿ ಮರಳಿ ಬರುತ್ತಾರೆ. ಇವರು ಕೆಲವೊಮ್ಮೆ ವ್ಯಾಪಾರ ಮಾಡಲು ಮಂಡ್ಯ, ಹಾಸನ, ಶ್ರೀರಂಗಪಟ್ಟಣ, ಹುಣಸೂರು, ಕೊಳ್ಳೆಗಾಲ, ಕೆ.ಆರ್.ನಗರ ಮುಂತಾದ ಪಟ್ಟಣಗಳ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಅಲ್ಲಿಯೇ ಸ್ವಲ್ಪ ದಿನಗಳ ಕಾಲ ನೆಲೆಸಿ ವ್ಯಾಪಾರ ಮಾಡುತ್ತಾರೆ. ಕೆಲವು ಹಳ್ಳಿಗಳಲ್ಲಿ ಗ್ರಾಹಕರು ಇವರಿಗೆ ಕಾರದ ಪುಡಿ ಮತ್ತು ದವಸ ಧಾನ್ಯಗಳನ್ನು ಕೊಡುತ್ತಾರೆ. ಹೀಗೆ ಒಂದು ವಾರ ಹಳ್ಳಿಗಳಲ್ಲಿ ವಾಸ ಮಾಡಿ ಕೂದಲನ್ನು ಸಂಗ್ರಹಿಸಿ, ನಂತರ ಆ ಕೂದಲನ್ನು ಬಾಬಣ್ಣನಿಗೆ ಮಾರಾಟ ಮಾಡುತ್ತಾರೆ. ಹೀಗೆ ನಮ್ಮ ಕೂದಲು ವ್ಯಾಪಾರಸ್ಥರು ಕೂದಲು ವ್ಯಾಪಾರವನ್ನು ಮೈಸೂರು ಮಾತ್ರವಲ್ಲದೇ ಇತರ ಜಿಲ್ಲೆಗಳಿಗೂ ವಿಸ್ತರಿಸಿಕೊಂಡಿದ್ದಾರೆ.

ಕೂದಲಿನ ವಿಧಗಳು ಮತ್ತು ಅದರ ಪರಿಚಯ
ಕೂದಲು ವ್ಯಾಪಾರದಲ್ಲಿ ನಾವು ಕೂದಲನ್ನು ನಾಲ್ಕು ರೀತಿಯಲ್ಲಿ ವಿಂಗಡಿಸಿದ್ದೇವೆ. ಬಿಳಿ, ಕಪ್ಪು, ಕೆಂಚು, ಉದ್ದ ಕೂದಲು. ಇದರಲ್ಲಿ ಒಂದೊಂದು ವಿಧದ ಕೂದಲಿಗೆ ಬೇರೆ ಬೇರೆ ಬೆಲೆ ಇದೆ. ಕಪ್ಪು ಕೂದಲಿನ ಬೆಲೆ ಕೆಜಿಗೆ ಸುಮಾರು 4500 ರೂ. ಇದೆ. ಈ ಕೂದಲಿಗೆ ಅಪಾರವಾದ ಬೇಡಿಕೆ ಇದ್ದು, ಇದಕ್ಕೆ ಬೆಲೆ ಜಾಸ್ತಿ ಇರುವುರಿಂದ ನಮಗೆ ಲಾಭವಾಗುತ್ತದೆ. ಹೀಗಾಗಿ ಕಪ್ಪು ಕೂದಲು ಸಂಗ್ರಹಕ್ಕೆ ನಾವು ಹೆಚ್ಚಿನ ಮಹತ್ವ ನೀಡುತ್ತೇವೆ. ಇನ್ನು ಕೆಂಚು ಕೂದಲಿಗೆ ಮಧ್ಯಮ ಬೆಲೆ ಇದ್ದು, ಬೇಡಿಕೆಯೂ ಅಷ್ಟಾಗಿ ಇಲ್ಲ. ಕೆಂಚು ಕೂದಲಿನಿಂದ ನಮಗೆ ಜಾಸ್ತಿ ಲಾಭವಾಗುವುದಿಲ್ಲ. ಅದೇ ರೀತಿ ನಷ್ಟವು ಆಗುವುದಿಲ್ಲ. ಹೀಗಾಗಿ ಕೆಂಚು ಕೂದಲನ್ನು ಕಡಿಮೆ ಪ್ರಮಾಣದಲ್ಲಿ ಸಂಗ್ರಹಿಸುತ್ತೇವೆ. ಅದೇ ರೀತಿ ಬಿಳಿ ಕೂದಲಿಗೆ ಬೇಡಿಕೆ ತುಂಬಾ ಕಡಿಮೆ ಇದ್ದು, ಅದರ ಸಂಗ್ರಹದಿಂದ ನಮಗೆ ಸ್ವಲ್ಪ ನಷ್ಟವಾಗುತ್ತದೆ. ಹೀಗಾಗಿಯೇ ಬಿಳಿ ಕೂದಲನ್ನು ನಾವು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವುದಿಲ್ಲ.

ಕೂದಲು ಉದುರುವಿಕೆ
ಇನ್ನು ಅನೇಕರು ನಮಗೆ ಕೇಳುವ ಸಾಮಾನ್ಯ ಪ್ರಶ್ನೆ ಎಂದರೆ “ನೀವು ಕೂದಲು ವ್ಯಾಪಾರ ಮಾಡುತ್ತೀರಲ್ಲಾ, ಹಾಗಾದ್ರೆ ನಿಮಗೆ ಗೊತ್ತಾ ಕೂದಲು ಏಕೆ ಉದುರುತ್ತದೆ..?” ಎಂದು. ಆದರೆ ಈ ಕುರಿತು ನಮಗೆ ಸ್ವಲ್ಪ ಮಾತ್ರ ಗೊತ್ತು. ಅತಿಯಾದ ಮಾನಸಿಕ ಒತ್ತಡ ಮತ್ತು ಥೈಯ್ರಾಯ್ಡ್ದಿಂದ ನಮ್ಮ ತಲೆಯ ಭಾಗದಲ್ಲಿರುವ ನರಗಳಲ್ಲಿ ರಕ್ತ ಸಂಚಾರ ಕುಂಟಿತವಾದಾಗ ಈ ಕೂದಲು ಉದುರುವುದು ಹೆಚ್ಚಾಗುತ್ತದೆ.
ನೀವು ಈಗಾಗಲೇ ಕೂದಲು ವ್ಯಾಪಾರದ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿದ್ದೀರಿ. ಆದರೆ ಈ ಕೂದಲು ಯಾರು ಕೊಂಡುಕೊಳ್ಳುತ್ತಾರೆ..? ನಂತರ ಅದನ್ನು ಏನು ಮಾಡುತ್ತಾರೆ..? ಎಂಬ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿವೆಯಲ್ಲವೇ..? ಹಾಗಾದ್ರೆ ಈಗ ನಾನು ನಿಮಗೆ ಈ ಕುರಿತು ತಿಳಿಸುತ್ತೇನೆ.
ನಾವು ಪ್ರತಿದಿನ ಸಂಗ್ರಹಿಸಿದ ಕೂದಲನ್ನು ಬಾಬಣ್ಣ ಎನ್ನುವವರಿಗೆ ಕೊಡುತ್ತೇವೆ. ಅವರು ನಮ್ಮಿಂದ ಒಂದು ದರದಲ್ಲಿ ಕೊಂಡುಕೊಂಡು ನಂತರ, ಅದನ್ನು ಅವರಿಗೆ ಗೊತ್ತಿರುವ ದೊಡ್ಡ ಮಟ್ಟದ ಕೂದಲು ವ್ಯಾಪಾರಿಗೆ ಮತ್ತೊಂದು ದರದಲ್ಲಿ ಮಾರಾಟ ಮಾಡುತ್ತಾರೆ. ದೊಡ್ಡ ವ್ಯಾಪಾರಿ ಮತ್ತು ನಮ್ಮ ನಡುವೆ ಸೇತುವೆಯಾಗಿ ಬಾಬಣ್ಣ ಕೆಲಸ ಮಾಡುತ್ತಾರೆ. ಇನ್ನು ದೊಡ್ಡ ಕೂದಲು ವ್ಯಾಪಾರಿಗಳು ಕೂದಲನ್ನು ತೆಗೆದುಕೊಂಡು ‘ಚೌಲಿ’ ಮಾಡುತ್ತಾರೆ ಎಂದು ನಾವು ಕೇಳಿದ್ದೇವೆ. ಇನ್ನು ಕೆಲವು ಕೂದಲು ಉದ್ಯಮಿಗಳನ್ನು ಅಪಾರ ಪ್ರಮಾಣದ ಕೂದಲನ್ನು ವಿದೇಶಗಳಿಗೆ ರಫ್ತು ಮಾಡುತ್ತಾರೆ.

ಕೂದಲಿನ ಮರುಬಳಕೆ ಕುರಿತು
ಕೂದಲಿನ ಮರುಬಳಕೆಯ ಬಗ್ಗೆ ನಮಗೆ ಸಾಕಷ್ಟಯ ಮಾಹಿತಿ ಇಲ್ಲ. ಆದರೆ ನಮ್ಮ ಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗುವುದರಿಂದ ಅವರಿಂದ ಅಲ್ಪ-ಸ್ವಲ್ಪ ತಿಳಿದುಕೊಂಡಿದ್ದೇವೆ. ಕೂದಲು ವ್ಯಾಪಾರ ಮಾಡುವ ಕೆಲವು ಜನಕ್ಕೆ ಮಾತ್ರ ಈ ಮರುಬಳಕೆ ಬಗ್ಗೆ ತಿಳಿದಿದೆ. ಅವರಲ್ಲಿ ಕೆಲವು ಜನಕ್ಕೆ ಪರಿಸರದ ಮೇಲೆ ಹೆಚ್ಚು ಕಾಳಜಿ ಇದೆ. ಕೆಲವು ಕೂದಲು ವ್ಯಾಪಾರಿಗಳು ಹೇಳುವ ಪ್ರಕಾರ “ನಾವು ಪರಿಸರಕ್ಕೆ ಸಹಾಯ ಮಾಡುತ್ತಿರುವುದು ನಿಜ. ಏಕೆಂದರೆ ನಾವು ಕೂದಲು ಸಂಗ್ರಹ ಮಾಡದಿದ್ದರೆ, ಪರಿಸರದಲ್ಲೆಲ್ಲಾ ಹರಡುವ ಕೂದಲು ಮಣ್ಣಿನಲ್ಲಿ ಸುಲಭವಾಗಿ ಕರಗುವುದಿಲ್ಲ. ಇದರಿಂದ ಮಣ್ಣಿನ ಸತ್ವವೂ ಕಡಿಮೆಯಾಗಿ, ಗಿಡಮರಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗೇ ಬೀದಿ ನಾಯಿಗಳು, ಹಸುಗಳು, ಹಂದಿ ಈ ರೀತಿಯ ಅನೇಕ ಪ್ರಾಣಿಗಳು ಕೂದಲನ್ನು ತಿನ್ನುತ್ತವೆ. ಇದರಿಂದÀ ಅವುಗಳ ಜೀವಕ್ಕೆ ಹಾನಿ ಉಂಟಾಗುತ್ತದೆ. ಕೂದಲು ಸಂಗ್ರಹ ಮಾಡುವುದರಿಂದ ಇಂತಹ ಅನೇಕ ಸಮಸ್ಯೆಗಳಿಗೆ ನಾವು ಪ್ರಾರಂಭದಲ್ಲೇ ಕಡಿವಾಣ ಹಾಕುತ್ತೇವೆ.
ಕೂದಲು ವ್ಯಾಪಾರಿಗಳ ಕತೆಗಳು
ಕೂದಲು ವಾನಾವು ನಿಮಗೆ ಕೂದಲು ವ್ಯಾಪಾರಿಗಳು ಬಾಲ್ಯದಲ್ಲಿ ಕಳೆದ ಕೆಲ ಸಿಹಿಕಹಿ ಕತೆಗಳ ಬಗ್ಗೆ ತಿಳಿಸುತ್ತೇವೆ. ನಮ್ಮ ಸಮುದಾಯದಲ್ಲಿ ಅಂಬಿಕಾ ಎನ್ನುವವರು ಇದ್ದು, ಅವರು ನಮ್ಮೊಂದಿಗೆ ತಮ್ಮ ಜೀವನದಲ್ಲಿ ನಡೆದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ನಾವು ಅವರ ಮನದಾಳದ ಮಾತುಗಳನ್ನು ನಿಮಗೆ ತಿಳಿಸುತ್ತಿದ್ದೇವೆ. ಅವರು ಚಿಕ್ಕ ವಯಸ್ಸಿನಲ್ಲಿ ತುಂಬಾ ತುಂಟಾಟ ಮಾಡುತ್ತಿದ್ದರಂತೆ. ಸ್ನೇಹಿತರೊಂದಿಗೆ ಸೇರಿ ಆಟವಾಡುತ್ತಾ, ಕಾಲ ಕಳೆಯುತ್ತಿದ್ದರು. ಪೋಷಕರೆಲ್ಲರೂ ಕೆಲಸಕ್ಕೆಂದು ಹೊರಟು ಹೋದ ನಂತರ, ಎಲ್ಲರೂ ಸೇರಿಕೊಂಡು ಮನೆಯ ಹತ್ತಿರವಿದ್ದ ಹೊಳೆಯ ಬಳಿ ಆಟವಾಡೋದೆ ಇವರ ಕೆಲಸವಾಗಿತ್ತು. ಆ ಹೊಳೆಯ ಹತ್ತಿರ ಒರ್ವ ಮಾನಸಿಕ ಅಸ್ವಸ್ಥ ಹೆಂಗಸು ಸದಾ ಕುಳಿತಿರುತ್ತಿದ್ದಳಂತೆ. ಇವರೆಲ್ಲಾ ಸೇರಿ ಅವಳನ್ನು ‘ಹುಚ್ಚಿ..ಹುಚ್ಚಿ..’ ಎಂದು ರೇಗಿಸಿದಾಗ, ತನ್ನಲ್ಲಿರುವ ಒಂದು ತಟ್ಟೆಯನ್ನು ಹಿಡಿದು ಅವಳು ಹೊಡೆಯಲು ಬರುತ್ತಿದ್ದಳು. ಹೀಗೆ ಒಂದು ದಿನ ಇವರೆಲ್ಲಾ ಅವಳನ್ನು ರೇಗಿಸಿದಾಗ ತಟ್ಟೆ ಹಿಡಿದು ಅವಳು ಹೊಡೆಯಲು ಬಂದಾಗ, ಅವಳ ತಟ್ಟೆಯನ್ನೇ ಇವರೆಲ್ಲಾ ಸೇರಿ ಮುರಿದು ಹಾಕಿದರಂತೆ. ಈ ವಿಷಯ ಅಂಬಿಕಾ ಅವರ ಮನೆಯವರಿಗೆ ತಿಳಿದಾಗ, ಅವರು ಅವಳ ತಟ್ಟೆಯನ್ನು ಸರಿ ಮಾಡಿಕೊಟ್ಟರು. ಈ ವಿಷಯ ಅಂಬಿಕಾ ಅವರ ಮನಸ್ಸಿನಲ್ಲಿ ಇನ್ನು ಹಚ್ಚಹಸಿರಾಗಿದೆ. ಇನ್ನು ಅಂಬಿಕಾ ಅವರು ಊರುರು ತಿರುಗುತ್ತಾ, ವ್ಯಾಪಾರ ಮಾಡುವಾಗ, ಒಂದು ಊರಿನಲ್ಲಿ ಒರ್ವ ಅಜ್ಜಿ ಇದ್ದರಂತೆ. ಇವರು “ಕೂದಲು ಇದೆಯಾ ಅಮ್ಮಾ..?” ಎಂದು ಕೇಳಿದಾಗ, ಅಜ್ಜಿಯೂ “ನಿನಗೆ ಎಷ್ಟು ಮಕ್ಕಳು..? ಊಟ ಆಯ್ತಾ..? ನಿಮ್ಮದು ಯಾವ ಊರು..? ಈ ಕೂದಲು ಏನು ಮಾಡುತ್ತೀರಿ..? ಎಂದು ಸುಮ್ಮನೆ ಅನಾವಶ್ಯಕವಾಗಿ ಮಾತನಾಡಿಸುತ್ತಿದ್ದರಂತೆ. ಕೂದಲು ಇದೆಯಾ..? ಎಂದು ಯಾಕಾಂದ್ರು ಕೇಳಿದ್ವೊ.. ಎಂದು ಅಂದುಕೊಳ್ಳುತ್ತಿದ್ದಂತೆ. ಹೀಗೆ ಅಂಬಿಕಾ ಅವರ ಬದುಕು ಕೂದಲು ವ್ಯಾಪಾರದೊಂದಿಗೆ ಬೆರೆತುಕೊಂಡಿದೆ.
ಇನ್ನು ಅಂಬಿಕಾ ಅವರ ಕತೆ ಹೀಗಾದ್ರೆ, ಚಂದ್ರಮ್ಮ ಎನ್ನುವವರ ಕತೆ ಇದ್ದಕ್ಕಿಂತ ಭಿನ್ನವಾಗಿದೆ. ಅವರು ಕೂಡಾ ತಮ್ಮ ಜೀವನದಲ್ಲಿ ನಡೆದ ಕೆಲ ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಕೂದಲು ವ್ಯಾಪಾರ ಮಾಡುವವರು ಇಷ್ಟು ಏರಿಯಾ ನಿನ್ನದು, ಇಷ್ಟು ನನ್ನದು ಎಂದು ಹಂಚಿಕೊಳ್ಳುತ್ತಾರೆ. ಅವರ ಏರಿಯಾ ಬಿಟ್ಟು ಬೇರೆ ಕಡೆ ಇನ್ನೊಬ್ಬರು ವ್ಯಾಪಾರ ಮಾಡುವಂತಿಲ್ಲ. ಹಾಗೆ ಆದ್ರೆ ಇಬ್ಬರಿಗೂ ನಷ್ಟವಾಗುತ್ತೆ. ಇನ್ನು ಒಂದು ದಿನ ಚಂದ್ರಮ್ಮನಿಗೆ ಅಂದು ವ್ಯಾಪಾರದಲ್ಲಿ ಅಷ್ಟನೂ ಲಾಭವಾಗಿರಲಿಲ್ಲ. ಒಂದು ಬೇಕರಿ ಬಳಿ ಬಂದಾಗ, ಅಲ್ಲಿ ಅವರ ಗೆಳತಿಯರೆಲ್ಲಾ ಬೇಕರಿಯಲ್ಲಿ ಪಪ್ಸ್ ಮತ್ತು ಕೇಕ್ ತಿನ್ನುತಿದ್ದರಂತೆ. ಅದರ ಅರ್ಥವೆಂದರೆ, ಇವರಿಗೆಲ್ಲಾ ಅಧಿಕ ಲಾಭವಾದಾಗ ಮಾತ್ರ ಹೀಗೆ ಬೇಕರಿಗೆ ಹೋಗಿ ತಿನ್ನುತ್ತಾರಂತೆ. ಚಂದ್ರಮ್ಮ ಅವರ ಬಳಿ ಬಂದಾಗ ಅವರೆಲ್ಲಾ ಸೇರಿ ಚಂದ್ರಮ್ಮನನ್ನು ರೇಗಿಸುತ್ತಾ, ಮಜಾ ಮಾಡುತ್ತಿದ್ದರಂತೆ. ಅವರನ್ನೆಲ್ಲಾ ನೋಡಿದ ಚಂದ್ರಮ್ಮಾ ಮನದಲ್ಲೇ, “ತಿನ್ನಿ..ತಿನ್ನಿ.. ನನಗೂ ಟೈಮ್ ಬರುತ್ತೇ..” ಎಂದು ಮುಗುಳ್ನಕ್ಕರಂತೆ. ಹೀಗೆ ಚಂದ್ರಮ್ಮನವರ ಬದುಕು ಕೂಡಾ ಕೂದಲು ವ್ಯಾಪಾರದೊಂದಿಗೆ ಬೆರೆತಿದೆ.
ಕೂದಲು ವ್ಯಾಪಾರಿಗಳ ಮುಂದಿನ ಭವಿಷ್ಯ..!
ನಮ್ಮ ಕೂದಲು ವ್ಯಾಪಾರ ಮಾಡುವ ಜನರಿಗೆ ಸ್ವಂತ ಮನೆ ಇಲ್ಲದಿದ್ದರಿಂದ, ಅವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗಬೇಕಿತ್ತು. ಅದರಿಂದ ನಮ್ಮ ಕೂದಲು ವ್ಯಾಪಾರದ ಕೆಲವು ಜನರಿಗೆ ಓದಿ, ಮಿಲಿಟರಿ, ಪೊಲೀಸ್ ಮತ್ತು ರಾಜಕಾರಣಿಯಾಗಬೇಕೆಂಬ ಆಸೆ ಇದ್ದರು, ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಅವರ ತಂದೆ-ತಾಯಿ ಕೆಲಸಕ್ಕೆ ಹೋಗಬೇಕಾದರೆ, ಮಕ್ಕಳನ್ನು ತಾವಿದ್ದ ಸ್ಥಳದಲ್ಲೇ ಬಿಟ್ಟು ಹೋಗುತ್ತಿದ್ದರು. ಹಾಗಾಗಿ ಆ ವಾತಾವರಣದಲ್ಲಿ ಬೆಳೆದ ಇವರಿಗೆ ಶಿಕ್ಷಣ ಪಡೆಯಲು ಯಾವುದೇ ರೀತಿಯ ಅವಕಾಶ ಸಿಗಲಿಲ್ಲ. ಆದರೆ ಈಗ ಕಾಲ ಬದಲಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಮತ್ತು ಒಂದು ದೊಡ್ಡ ವ್ಯಕ್ತಿಯಾಗಿಸಬೇಕು ಎಂಬ ಕನಸನ್ನು ಪೋಷಕರು ಕಾಣುತ್ತಿದ್ದಾರೆ. “ಈ ಕೆಲಸದಿಂದ ನಾವು ಪಟ್ಟ ಕಷ್ಟಗಳೇ ಸಾಕು. ನಮ್ಮ ಮಕ್ಕಳು ಕೂಡಾ ಎಲ್ಲರ ಹಾಗೆ ಸಮಾಜದಲ್ಲ್ಲಿ ಉತ್ತಮ ಸ್ಥಾನಮಾನಗಳಿಸಿ ಉತ್ತಮ ಜೀವನ ನಡೆಸಬೇಕು” ಎಂದು ಆಸೆ ಪಡುತ್ತಿದ್ದಾರೆ.
ಮಂಜುನಾಥ್, ಕೂದಲು ವ್ಯಾಪಾರಸ್ಥರು
ಮಂಜುನಾಥ್ ಅವರು ತುಂಬಾ ಸೈಲೆಂಟ್ ಮತ್ತು ಸ್ವಲ್ಪ ನಾಚಿಕೆ ಸ್ವಭಾವದವರು. ಆದರೆ ಅವರ ಜೊತೆ ಮಾತನಾಡಿದಾಗ ತುಂಬಾ ಸ್ಟ್ರಾಂಗ್ ಇದ್ದಾರೆ ಅನಿಸಿತು. ಇನ್ನು ಅವರನ್ನು ನೋಡಿದಾಗ ತುಂಬಾ ಖುಷಿ ಆಯಿತು. ಕೆಲವು ವಿಷಯಗಳ ಕುರಿತು ನಾವು ಕೇಳುವುದಕ್ಕಿಂತ ಜಾಸ್ತಿ ಹೇಳುತ್ತಿದ್ದರು.

ಅಂಬಿಕಾ, ಕೂದಲು ಆಯುವವರು
ಅಂಬಿಕಾ ಅವರು ತುಂಬಾ ಜೋಶ್ನಿಂದ ಮಾತನಾಡಿದರು. ಅವರು ತುಂಬಾ ಸ್ಟ್ರಾಂಗ್ ಇದ್ದು, ಎಲ್ಲವನ್ನೂ ಒಪನ್ ಆಗಿ ಹೇಳುತ್ತಾರೆ. ಯಾವಾಗಲೂ ತಮಾಷೆಯಿಂದ ಇರುತ್ತಾರೆ. ಯಾವುದನ್ನು ಜಾಸ್ತಿ ಮುಂಚಿಟ್ಟುಕೊಳ್ಳುವುದಿಲ್ಲ.

ಚಂದ್ರಮ್ಮ, ಕೂದಲು ಆಯುವವರು
ಚಂದ್ರಮ್ಮ ಅವರು ತುಂಬಾ ಖುಷಿಯಾಗಿರುವ ಲವಲವಿಕೆಯ ವ್ಯಕ್ತಿ. ಜೊತೆಗೆ ನಾವು ಕೇಳಿದಕ್ಕಿಂತ ಜಾಸ್ತಿ ಹೇಳುತ್ತಾರೆ. “ಯಾವ ಪ್ರಶ್ನೆಯನ್ನು ಬೇಕಾದರು ಕೇಳಿ” ಎಂದು ಅವರೇ ಹೇಳುತ್ತಿದ್ದರು. ಅವರು ಎಷ್ಟು ಹೇಳುತ್ತಿದ್ದರು ಎಂದರೇ, ನಾವು ಇನ್ನು ಏನಾದರೂ ಕೇಳಬೇಕು ಎಂದರೇ ನಮ್ಮಲ್ಲಿ ಪ್ರಶ್ನೆಗಳೇ ಇರಲಿಲ್ಲ. ಅವರು ನಮಗೆ ಕೆಲಸದಲ್ಲಿ ಆಗುವ ಕಷ್ಟ, ಸುಖ, ದು:ಖ ಎಲ್ಲವನ್ನು ಮುಕ್ತವಾಗಿ ಹೇಳಿದರು.

ನೀಲಮ್ಮ, ಕೂದಲು ಆಯುವವರು
ನೀಲಮ್ಮರವರು ಸದಾ ಚುರುಕಿನಿಂದ ಇರುತ್ತಾರೆ.ಇವರ ಮುಖವು ಸ್ವಲ್ಪ ಕೋಪದಿಂದ ಕಂಡರು, ಹೃದಯ ತುಂಬಾ ವಿಶಾಲವಾದದ್ದು. ಇವರು ನೋಡಲು ಕುಳ್ಳಗೆ, ಬೆಳ್ಳಗೆ, ಸ್ವಲ್ಪ ದಪ್ಪವಾಗಿ ಕಾಣುತ್ತಾರೆ. ಅವರ ಕಣ್ಣಿನಲ್ಲಿ ಸದಾ ಗೆಲ್ಲುವ ಛಲ ತುಂಬಿರುತ್ತದೆ ಹಾಗೆ ನಗುಮುಖದಿಂದ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಮಾತನಾಡಿಸುತ್ತಾರೆ.

ಬಾಬಣ್ಣ(ತಾಜ್), ಕೂದಲು ವ್ಯಾಪಾರಸ್ಥರು
ಬಾಬಣ್ಣ ನೋಡಲು ಬುದ್ದಿವಂತ ಹಾಗೂ ಸಿನಿಮಾ ಹೀರೊತರ ಇದ್ದರೆ. ಆದರೂ ಸಹ ಬಾಬಣ್ಣನವರು ಬೇರೆ ಕೆಲಸಕ್ಕೆ ಹೋಗದೆ ಕೂದಲು ವ್ಯಾಪಾರದಲ್ಲೇ ಒಬ್ಬರಾಗಿ ಬಿಟ್ಟದ್ದರೆ. ಇವರು ಬಗ್ಗೆ ಇನ್ನೂ ಹೇಳಬೇಕೆಂದರೆ ಮುಗ್ದ ಮುಖ ಹಾಗೂ ತುಂಬಾ ಒಳ್ಳೆಯ ಮನಸ್ಸಿನವರು.

ಮಕ್ಕಳ ಹೆಸರು:
ಹರೀಶ್.ಎಸ್, ಪ್ರಜ್ವಲ್.ಎಸ್, ಪ್ರೇಮ.ಎಂ, ನಿಖಿತಾ.ಎಂ, ದೀಪಿಕ.ವಿ, ಗಗನ್.ವಿ.
Facilitators: Kalabati Majumbar, Mahesh Hiremath and Chaitra T S
Super👌My Dr Buguri Friend’s…
Congratulations 😍❤️
LikeLike
Thank you very much!
LikeLike